Chief Editor
Manohar. R (Manu)
Photo Journalist
chitrataramanu@gmail.com
+91 9845549026
ಒನ್ ರಾಬರಿ ಕಥೆ ಬಂಗಾರದ ಬಿಸ್ಕಟ್ ಮೇಲೆ ನಾಯಕನ ಕಣ್ಣು 3/8 ***
Posted date: 11 Sat, Mar 2023 11:53:12 AM
ಬಂಗಾರದ ಬಿಸ್ಕಿಟ್ ಇದ್ದ ಬ್ಯಾಗನ್ನು ಪಡೆದುಕೊಳ್ಳಲು ಒಬ್ಬ  ಯುವಕ ಹಾಗೂ ಶಾಸಕನೊಬ್ಬ  ಪ್ರಯತ್ನಿಸುವಾಗ ನಡೆಯುವ ಘಟನೆಗಳನ್ನಿಟ್ಟುಕೊಂಡು ಮಾಡಿರುವ ಚಿತ್ರ ಒನ್ ರಾಬರಿ ಕಥೆ. 
 
ಖೈದಿ ಕೃಷ್ಣ(ರಣಧೀರ್ ರ್‌ಗೌಡ) ಪೊಲೀಸರಿಂದ ತಪ್ಪಿಸಿಕೊಂಡು ಬರುತ್ತಿರುವಾಗ ಹಾದಿಯಲ್ಲಿ ಕಾರೊಂದು  ಕಾಣಿಸುತ್ತದೆ. ಗೋಲ್ಡ್ ಬಿಸ್ಕಿಟ್ ಡೀಲ್ ಮಾಡಲು ಬಂದಿದ್ದ  ಶಾಸಕನ ಕಾರದು. ಕೃಷ್ಣ ಬಚಾವಾಗಲೆಂದು ಅ ಕಾರಲ್ಲಿ ಕುಳಿತುಕೊಳ್ಳುತ್ತಾನೆ. ಶಾಸಕ (ಸುಂದರರಾಜ್)  ಡೀಲ್ ಮುಗಿಸಿಕೊಂಡು ಕೋಟಿಗಟ್ಟಲೆ ಬೆಲೆಬಾಳುವ ಬಂಗಾರದ ಗಟ್ಟಿಗಳಿದ್ದ ಬ್ಯಾಗನ್ನು ತನ್ನ ಕಾರಿನ ಡಿಕ್ಕಿಯಲ್ಲಿಟ್ಟು ಮುಂದೆಬಂದು ಹತ್ತಬೇಕೆನ್ನುವಷ್ಟರಲ್ಲಿ ಕಾರು ಮುಂದೆ ಹೊರಟೇಬಿಡುತ್ತದೆ. ಕಕ್ಕಾಬಿಕ್ಕಿಯಾದ ಆ ಶಾಸಕ ಪೋಲೀಸರಿಗೆ ಕಾಲ್ ಮಾಡುತ್ತಾನೆ. ಆಗ ಕೃಷ್ಣ ಬಂಗಾರದ ಗಟ್ಟಿಯಿದ್ದ ಬ್ಯಾಗನ್ನು ರಾವ್‌ಗಡ ಎಂಬ ಹಳ್ಳಿಯ ಸಮೀಪದ ಬಯಲು ಜಾಗದಲ್ಲಿ ಗುಂಡಿ ತೆಗೆದು ಹೂತು ಅದರಮೇಲೆ ದೊಡ್ಡ ಕಲ್ಲನ್ನು ನೆಟ್ಟು ಬರುವಾಗ ಪೋಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಕೃಷ್ಣನ ಕೈಯಿಂದ ಬಂದ ರಕ್ತ ಆ ಕಲ್ಲಮೇಲೆ ಬಿದ್ದು ಅದೊಂಥರಾ ದೇವರಹಾಗೆ ಕಾಣಿಸುತ್ತದೆ. ಬೆಳಗಾದಮೇಲೆ ಊರಜನರಿಗೆ ಅದು ನೆಲದಲ್ಲೇ ಒಡಮೂಡಿದ ಕಲ್ಲು ದೇವರ ಹಾಗೆ ಗೋಚರಿಸುತ್ತದೆ. ನಂತರ ಅಲ್ಲಿನ ಜನ  ಅದಕ್ಕೊಂದು  ಗುಡಿಯನ್ನೂ  ನಿರ್ಮಿಸುತ್ತಾರೆ.  ಇತ್ತ ಪುನ: ಜೈಲುಸೇರಿದ ಕೃಷ್ಣ ಕೆಲ ವರ್ಷಗಳ ನಂತರ ಸೆರೆವಾಸ ಮುಗಿಸಿಕೊಂಡು ಹೊರಬರುತ್ತಾನೆ. ತಾನು ಬಚ್ಚಿಟ್ಟ ಬಂಗಾರ  ಹುಡುಕಿಕೊಂಡು ಬರುವ ಆತನಿಗೆ ಅಲ್ಲಿ ಗುಡಿ ನಿರ್ಮಾಣವಾಗಿರುವುದು ಕಂಡು ದಿಗಿಲಾಗುತ್ತದೆ. ನಂತರ ಸರ್ವೇ ಆಫೀಸರ್ ವೇಶದಲ್ಲಿ ಆ ಊರನ್ನು ಸೇರಿಕೊಂಡ ಕೃಷ್ಣ  ಬಂಗಾರವಿದ್ದ ಬ್ಯಾಗನ್ನು   ಹೇಗೆ ಎಗರಿಸುವುದೆಂದು ಪ್ಲಾನ್  ಮಾಡುತ್ತಾನೆ. ತನ್ನ  ಗೆಳೆಯ ಡೀಲ್ ಡಿಂಗ್ರಿ(ಶಿವರಾಜ್ ಕೆ,ಆರ್.ಪೇಟೆ)ಯನ್ನೂ ಅಲ್ಲಿಗೆ ಕರೆಸಿಕೊಳ್ಳುತ್ತಾನೆ. ಇದೇ ಸಮಯದಲ್ಲಿ ಆ ಊರಿನ ಟೀಚರ್ ರಾಧಾಳ(ರಿಷ್ವಿ ಭಟ್) ಪರಿಚಯವಾಗುತ್ತದೆ. ಕೃಷ್ಣನ ರೂಪಕ್ಕೆ  ಟೀಚರ್ ರಾಧಾ ಮನಸೋಲುತ್ತಾಳೆ. ಹೀಗೇ ಸಾಗುವ ಕಥೆಯಲ್ಲಿ  ಮಧ್ಯಂತರದ ನಂತರ ಎದುರಾಗೋ  ಒಂದಷ್ಟು  ಟ್ವಿಸ್ಟ್ಗಳು ನೋಡುಗರಲ್ಲಿ  ಕುತೂಹಲ ಕೆರಳಿಸುತ್ತ ಸಾಗುತ್ತವೆ.  ಇತ್ತ ಶಾಸಕ ತನ್ನ ಬಂಗಾರವನ್ನು ಕದ್ದೊಯ್ದವನನ್ನು ಹಿಡಿದೇ ತೀರಬೇಕೆಂದು ಸಾಕಷ್ಟು ಪ್ರಯತ್ನ ಮಾಡುತ್ತಾನೆ. ನಕಲಿ ಸರ್ವೇಯರ್ ಒಬ್ಬನನ್ನು ಊರಿಗೆ  ಕಳಿಸುತ್ತಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ ಊರಲ್ಲಿದ್ದ  ಕಲ್ಲುದೇವರ ಗುಡಿಯಲ್ಲಿ ಚಿನ್ನದ ಬ್ಯಾಗ್  ಸುರಕ್ಷಿತವಾಗಿರುತ್ತದೆ,  ಕೊನೆಗೆ ಆ ಬಂಗಾರದ ಗಟ್ಟಿಗಳಿದ್ದ ಬ್ಯಾಗ್ ಯಾರ ಪಾಲಾಯಿತು, ನಕಲಿ ಸರ್ವೇಯರ್ ಏನಾದ, ಕೃಷ್ಣ ಆ ನಿಧಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತೇ ಹೀಗೆ ನಿಮ್ಮ  ಮನದಲ್ಲಿ ಏಳುವ ನೂರಾರು ಪ್ರಶ್ನೆಗಳಿಗೆ ಉತ್ತರ ಚಿತ್ರದಲ್ಲಿದೆ. ತಡಮಾಡದೆ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಕಳ್ಳ ಕೃಷ್ಣನ ರಾಬರಿ ಕಥೆಯನ್ನು ನೋಡಿಕೊಂಡು ಬನ್ನಿ.  ಲಾಜಿಕ್ ಹುಡುಕದೆ ಒಂದು  ಸಿನಿಮಾ ಆಗಿ  ನೋಡುತ್ತ ಹೋದಂತೆ ಚಿತ್ರವು ಖಂಡಿತ  ಒಳ್ಳೆಯ  ಮನರಂಜನೆ ನೀಡುತ್ತದೆ. ಇಡೀ ಕಥೆಯನ್ನು  ಎಂಟರ್‌ಟೈನಿಂಗ್ ಆಗಿ ನಿರ್ದೇಶಕ  ಗೋಪಾಲ್ ಹಳ್ಳೇರ ಹೊನ್ನಾವರ ಅವರು  ತೆಗೆದುಕೊಂಡು ಹೋಗಿದ್ದಾರೆ.  ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮನ್ವಿ ಕ್ರಿಯೇಷನ್ಸ  ಮೂಲಕ  ಈ ಚಿತ್ರವನ್ನು ನಿರ್ಮಿಸಿದ್ದಾರೆ.  
 
ನಾಯಕ ರಣದೀರ್‌ಗೌಡ ಕಳ್ಳನ ಪಾತ್ರವನ್ನು ಅಚ್ಚುಕಟ್ಟಾಗಿ  ನಿಭಾಯಿಸಿದ್ದಾರೆ. ಇನ್ನು ನಾಯಕಿ ರಿಶ್ವಿ ಭಟ್ ಉತ್ತರ ಕರ್ನಾಟಕದ ಭಾಷೆಯನ್ನು ಕಷ್ಟಪಟ್ಟು ಮಾತಾಡಿದ್ದಾರೆ.  ಶಿವರಾಜ್ ಕೆಆರ್ ಪೇಟೆ ಅವರ ಪಾತ್ರಕ್ಕೆ ಹೆಚ್ಚಿನ ಸೀನ್ ನೀಡುವ  ಅವಕಾಶವಿತ್ತು.  ನಿರ್ಮಾಪಕ ಸಂತೋಷ್ ನಾಗೇನಹಳ್ಳಿ ಅವರು ಪೋಲೀಸ್ ಇನ್ಸ್ಪೆಕ್ಟರ್ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.  ಚಿತ್ರದಲ್ಲಿನ ಶ್ರೀವತ್ಸ ಸಂಗೀತ ಸಂಯೋಜನೆಯ ನಾಟಿ ಸ್ಟೈಲ್ ಹಾಡು  ಸಖತ್ ಕ್ಯಾಚಿ ಆಗಿದೆ. ಉಳಿದಂತೆ ಬರುವ ಡ್ರೀಮ್ ಸಾಂಗ್ ಗಳು ಕಲರ್ ಫುಲ್ ಆಗಿ ಮೂಡಿಬಂದಿವೆ. ಚಿತ್ರದ ಕ್ಯಾಮೆರಾ ವರ್ಕ್ ಉತ್ತಮವಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಒನ್ ರಾಬರಿ ಕಥೆ ಬಂಗಾರದ ಬಿಸ್ಕಟ್ ಮೇಲೆ ನಾಯಕನ ಕಣ್ಣು 3/8 *** - Chitratara.com
Copyright 2009 chitratara.com Reproduction is forbidden unless authorized. All rights reserved.